ಶುಕ್ರವಾರ, ಅಕ್ಟೋಬರ್ 18, 2013

  ಕಡೀಕ ಒಂದ ಮಾತು


ಬರುಬರುತ್ತ ದಿನಮಾನ ಸುಮಾರು ಎಂದರು
ಮಾಪನಕ್ಕೆ ಕುಂತಾಗ ಇಂಥದೇ ಮಾತು, ಮುರುಕು
ಯಾರಿಗೆ ಯಾರೋ ಖೂನ ಹೇಳಾವರು ಉಳಿದಿಲ್ಲ
ದಿಗಿಲಗೊಂಡವರಿಗಂತೂ ನೆಲಾ ಹೂತರೂ ತಿಳಿಯಾಕಿಲ್ಲ

ಎಮ್ಮಿ ಹೋತಾ ಕೋಣಾ ಕುರಿ ನಂಬಿಗಿ ಉಳಿದಿಲ್ಲ
ಕಡ್ಯಾವರು ಬಡ್ಯಾವರು ಕಡೀಕ ನಿಂತಾರ
ಸುದ್ದ ಇದ್ದ ಮಂದಿ ದಂಗಾಗಿ ಒಳಗ ಕುಂತಾರ
ಹುಚ್ಚಮಲ್ಲಿ ಸಂತ್ಯಾಗ ಕೊಳ್ಳಾಕ ಏನ ಸಿಗತೈತಿ
ಹೀಂಗ ಸಂಜೀತನಾ ಬಿಡದ ಹುಡಕೀ
ಸಿಕ್ಕರ ಪಾಲ ಹಂಚಕೊಳ್ಳಾಕ ಪಾಳಿ ನಿಂತಾರ.

ಹೆಣಕ್ಕ ಹೆಗಲ ಕೊಡಾವ್ರು ಮಾನಗೇಡಿ ಆಗ್ಯಾರ
ಹೊತಗೊಂಡ ಆರ್ಯಾಣ ಮುಟ್ಟಿಸಿದರ ಪಾಡೈತಿ
ಅರಳಿದ ಹೂವಾ ಹಸಿ ಹುಲ್ಲಾ ಮಿನುಕು ಹುಳಾ
ನಡದವರು ತುಳದ ತುಳಿದು ಮಣ್ಣಮಾಡ್ಯಾರ

ಉರಿಯೋ ದೀಪ ಆರಿಸಾಕ ಗಾಳಿನ ಬೇಕಾಗಿಲ್ಲ
ಬೆಳ್ಳ ಮುಖದವರು ಬಣ್ಣಾ ಬಡಕೊಂಡ ಕರ್ರಗಾಗ್ಯಾರ
ಮ್ಯಾಲ ನೋಡಾಕ ಚೆಂದ ಒಳಗೆಲ್ಲಾ ಬಡಿವಾರ
ಮಾತಿಗೆ ಮಾತ ಬೆಳೆಸಿದರ ಬಿಸಿಲ ಜಾಸ್ತಿ; ಮೌನಾನ ಆಸ್ತಿ

ಕಡೀಗಿ ಒಂದ ಮಾತ ಉಳೀತು
ಪಡಕೊಂಡವರ ಋಣಕ್ಕ ಈಗೇನು ಹೇಳಲಾಗದು

- ಡಾ. ಪ್ರಕಾಶ ಗ. ಖಾಡೆ



ಈ ದಿನ


ಈ ದಿನ ಆರಂಭವಾಗುವ
ಹೊತ್ತಿಗೆ ಮಬ್ಬು ಕತ್ತಲಲ್ಲಿ
ಅಷ್ಟಿಷ್ಟು ಬೆಳಕ ಹೊತ್ತಿಸಿದ್ದ ಚುಕ್ಕೆಗಳು
ವಾಕಿಂಗಿನ ದಾರಿಯಲ್ಲಿ
ನಡೆವ ಹೆಜ್ಜೆಗಳಿಗೆ ನೆರವಾಗಿದ್ದು
ನಿರಾಳ ನಡೆಗೆ ಸಾಕ್ಷಿಯಾಗಿತ್ತು

ಒಬ್ಬಂಟಿ ಹೀಗೆ ಸುತ್ತಾಡಿ ಬರೋಣವೆಂದು
ಹೊರಟವನ ದಾರಿಗೆ ಜೊತೆಯಾದ ಮುದುಕ
ಬದುಕಿನ ಜೀವನ ಗತಿಯಲ್ಲಿ
ಕಳಕೊಂಡ ಅನುಭವಗಳ ಸುಮ್ಮಸುಮ್ಮನೆ ಹೇರಿ
ಏಕಾಂತದ ಯೋಚನೆಗಳಿಗೆ
ಕೀಲಿ ಜಡಿದದ್ದು ಖಂಡಿತ ಈ ಬೆಳಗು
ಈ ತಂಪು ನನ್ನದೆನ್ನಿಸಲಿಲ್ಲ

ಸಾಗಿದ್ದು ಸವೆದದ್ದು
ಗಳಿಗೆಯಾದರೂ ಅನುಭವಿಸಿದ
ನೋವು ತಲ್ಲಣ ಹಿತ ಸ್ವಗತ
ಎಲ್ಲಕ್ಕೂ ಒಂದೊಂದೆ ಮುಖಗಳು
ಮುಖವಾಡಗಳು; ಇರುವ ಹೊತ್ತೂ
ಗತ್ತಿನಲ್ಲೇ ಮೆರೆದು ಮರೆಯಾಗುವ
ಹೊತ್ತಿಗೆ ಉಳಿದದ್ದು ಮತ್ತದೇ ನಾಳೆ
ಹಾಗೂ ಮತ್ತದೇ ಬೆಳಗು

- ಡಾ. ಪ್ರಕಾಶ ಗ. ಖಾಡೆ


ಅದಕಂದರ ಬದುಕ


ಮೊಗ್ಗಿನ ಮೊದಲ ಸಣ್ಣ ಬೀಜದ ನೆವಕ
ಒಡಮೂಡಿತೊಂದ ಅಸ್ತಿತ್ವದ ಇರುವ
ಅದ ಬೆಳೆಬೆಳೆದು ದಿನಾ ಆಟೀಟ ಅನುತ
ಹೂವಾಗಿ ಬಂತ ಜಗಕ; ಅದಕಂದರ ಬದುಕ

ಹೊಸಾ ಚೆಲುವಿಕಿ ಕಂಡವರ ಒಲವಿಕಿ
ಸೇರಿ ಬೆಳೆಸಿತ ಸಂಬಂಧ
ಇರುತನಾ ಎಂಥ ಆನಂದ
ಹೂವಾಗಿ ಅರಳಿದ ವ್ಯಾಳೇಕ ಏಸೋಂದು ದುಂಬಿ ಸಾಲ

ಉಂಡವರು ಕೊಟ್ಟಿದ್ದು ಬಿಟ್ಟಿದ್ದು ಏನಿರಲಿ
ಹಂಚಿದ್ದು ಮಾತ್ರ ಜೇನು ಹಾಲಾ
ಉಳಿದೀತ ಏನ ದಿನದಿನಕ ಕೂಡಿಡಲು
ಹೆಸರ ಹೇಳಲಿಕ್ಕ ಯಾರಿಲ್ಲ ಒಂದ ಖೂನಾ

ಬಿದ್ದ ಬೀಜದ ಮೊಳಕಿ
ಮತ್ತು ಹೊಸಾ ಹಾದಿ ಹುಡುಕಿ
ಗಾಳಿದಾಳಿಗಿ ಹಾರಿ ಹಾರ್ಯಾಡಿ
ಉಳಿದ್ಹಾಂಗ ಆತ ಸುಮ್ಮಕ
ಯಾಕ ಬೇಕ ನೂಕ
ನೊಂದವರ ಹಾಡಿರಲಿ ಬೆಳಕ ಹರಿವತನಕ


- ಡಾ. ಪ್ರಕಾಶ ಗ. ಖಾಡೆ



ಇರವಗೊಡದ ಜಗಕೆ


ಕನಸು ಆಳುವ ಸಮಯ
ಸುತ್ತಲಿನ ವಾಸ್ತವಿಕ ಜಗತ್ತು
ಎಲ್ಲ ಅಮೂರ್ತ.

ನಾನಷ್ಟೇ ಜೀವವಿರುವ ಪ್ರಾಣಿ
ಆಕ್ರಮಿತ ಕನಸಿಗೆ
ಪರಿವೆ ಹರಿದುಕೊಂಡ ಸ್ವತಂತ್ರ

ಇರುವ ಉಸಿರಿಗೂ
ಪ್ರತ್ಯೇಕತೆಯ ಭಾವ

ಕೂಗು ಹಾಕಿದರೂ
ಕಿವಿಗೆ ಬೀಳದ ಕಿವುಡು
ಆಡಿದ್ದು ಹಾಡಿದ್ದು
ಜಗದಗಲ ಮುಗಿಲಗಲ

ನೆಲಕ್ಕೆ ಊರದ ಕಾಲು
ದೇಶ ಸುತ್ತಿ ಬಂದರೂ
ಬಸವಳಿದದ್ದು, ಬೆದರಿ ಬೆಚ್ಚಿದ್ದು
ನಾಲ್ಕು ಹನಿ ಬೆವರು
ಉರುಳಿ ಬಿದ್ದಾಗಲೇ ಅರಿವು

ಛೇ
ಯಾರು ಎಬ್ಬಿಸಿದರು
ಇರವಗೊಡದ ಈ ಜಗಕೆ

- ಡಾ. ಪ್ರಕಾಶ ಗ. ಖಾಡೆ



ಸಾಲು ಹನಿಗಳು


ಕಾಮ
ಹುಟ್ಟುತ್ತದೆ
ಮಿಲನ ಅನುಭವಿಸುತ್ತದೆ
ತೃಪ್ತಿ
ಸಾಯುತ್ತದೆ
*
ಆಗಸದ ಚುಕ್ಕೆಗಳಿಗೆ
ಅದರದೇ ಬೆಳಕು
ನಿನ್ನ ನಗೆಗೂ
ಅಧರದೇ ಬೆಳಕು
*
ಬರೀ ಮಾತುಗಳು
ಇನ್ನೂ ಜೀವಂತವಾಗಿವೆ
ಶಬ್ದಾಲಂಕಾರಗಳಿಂದ ಅಲ್ಲ;
ತುಟಿ ಮೇಲೆ ನಿಂತ
ಒಂದು ಸಣ್ಣ ಪ್ರೀತಿಯಿಂದ
*
ನಾವೂ
ಜೋರು ಮಾಡಬಹುದು
ಸಿಕ್ಕವರ ಮೇಲೆ
ಏನು ಉಳಿಯುತ್ತದೆ ಹೇಳಿ
ಇಲ್ಲಿ ಪ್ರೀತಿ ಇರದ ಮೇಲೆ


- ಡಾ. ಪ್ರಕಾಶ ಗ. ಖಾಡೆ

ವಿಳಾಸ :
ಡಾ. ಪ್ರಕಾಶ ಗ. ಖಾಡೆ
ಸೆಕ್ಟರ್ ನಂ. 63, ನವನಗರ, ಬಾಗಲಕೋಟ.
ಮೊಬೈಲ್: 9845500890,








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ