ಭಾನುವಾರ, ಡಿಸೆಂಬರ್ 29, 2013

ಮತ್ತೆ ಮತ್ತೇ ಹನಿಗಳು.


ಮತ್ತೆ ಮತ್ತೇ ಹನಿಗಳು.

ಡಾ.ಪ್ರಕಾಶ ಗ.ಖಾಡೆ.


ಯಾರು ಪೋಣಿಸಿಟ್ಟೀರಿ ಇಲ್ಲಿ
ಪದಗಳಲ್ಲಿ ಹುದುಗಿದ ಮಾಲೆ :
ಎಷ್ಟೊಂದು ಮೈಚೆಲ್ಲಿವೆ ಹೂವರಾಶಿ
ನಮ್ಮೊಲುಮೆಯ ತೇರಿಗೆ.
*****
ಅಲ್ಲಿ ಮಾತುಗಳಿಗೆ
ಸುಮ್ಮನಿರಿಸುವ ಧಾವಂತ :
ಹೇಳಬೇಕಾದವರು
ನೋಡುತ್ತಿದ್ದಾರೆ ದಿಗಂತ.
*****
ಎಷ್ಟೊಂದು ಮಾಲೆಗಳು
ಇಲ್ಲಿ ಬಿದ್ದು ಬಿಕರಿಯಾಗಿವೆ :
ಈಗಷ್ಟೇ ಹೋದವರ ಕೊರಳ
ಅಲಂಕರಿಸಿ ಮೆರೆದಾಗಿದೆ.
*****
ಅವಳ ನಗುವಿಗೆ
ಅರ್ಥ ಹುಡುಕುತ್ತಿದ್ದೇನೆ :
ಹುಡುಕಿ ಕೊಡುವುದು ಬೇಡ
ನಿಮ್ಮ ಅರ್ಥಕೋಶದಿಂದ.
*****
ಎಷ್ಟೊಂದು ಧ್ವನಿಗಳು ಏಕವಾಗಿವೆ
ಈ ಲೋಕ ಬಯಲಲ್ಲಿ :
ದಾಖಲಾಗದೇ ಎಲ್ಲಿ ಹೋದವು
ಹುಟ್ಟು ಸಾವಿನ ಬದುಕಿನಲ್ಲಿ.
*****
ಮುಚ್ಚಿದ ಬಾಗಿಲು ಮುಂದೆ
ಕಾವಲು ಕುಳಿತ ನಾಯಿ :
ಮತ್ತೆ ಮತ್ತೆ ಎಚ್ಚರಗೊಂಡು
ಕಾಯುತ್ತಿತ್ತು ಬಂದಾಳೆ, ತಾಯಿ.
*****
ಗಾಯದ ನೋವು
ಮಾಯುತ್ತಾ ಬಂದಂತೆ :
ಕವಿತೆ ಕರಗುತ್ತಾ
ಹೋಗುತ್ತದೆ.
*****
ದೆಹಲಿ ಗದ್ದುಗೆ ಏರಿತು
ಅತಿ ಸಾಮಾನ್ಯ ಪೊರಕೆ.
ಜನತಂತ್ರದ ಉಸಿರಿಗೆ
ಇರಲಿ ಸದಾ ಶಕ್ತಿ ಪೂರೈಕೆ.
*****
ಕಣ್ಣ ತುಂಬಾ ತುಂಬಿಕೊಳ್ಳಿ
ಪ್ರಕೃತಿ ಸೊಬಗ ಐಸಿರಿ;
ನಾಳೆಗಾಗಿ ಉಳಿಸಿ ಬೆಳೆಸಿ
ಮನತುಂಬ ಹರಸಿ.
*****
ರಾತ್ರಿ ಆಗಸದಲ್ಲಿ ಮೆರೆವ
ನಕ್ಷತ್ರಗಳ ಒಡಲು ;
ಬೆಳಕ ಬಯಲಲ್ಲಿ ಬಿತ್ತಿದ
ಥಳಕು ಬಳುಕಿನ ಮಡಿಲು.
*****
ಹೇಳದೆ ಬಂದು ಕೇಳದೆ ಹೋದ
ದಾಖಲಾಗದ ಕನಸುಗಳು ;
ಮೌನದಲ್ಲೂ ಮಾತು ಮರೆತ
ಹುಸಿ ಮನದ ಭಾವಗಳು.
*****
ಜಗವೇ ಒಂದು ಗೂಡು
ಒಂದುಗೂಡಲು :
ಕಟ್ಟಬೇಡಿ ಅಡ್ಡಗೋಡೆ
ಮನಸ್ಸು ಒಡೆಯಲು.
*****
ಹರಿದ ಹಾಳೆಯಲ್ಲಿ
ಅವಳ ಚಿತ್ರವಿತ್ತು :
ತಾಯ ಮೊಗದ ನಗೆ 
ಎಂದೂ ಮಾಸದಂತಿತ್ತು.
*****

ಮನದ ಮೂಲೆಯಲ್ಲಿ
ಬಿದ್ದುಕೊಂಡಿವೆ
ಆಪ್ತವಾಗದ ಭಾವಗಳು ;
ಹರಿದು ಬಿಸಾಕಿದ ಹಾಳೆಯಲ್ಲಿ
ಬರೆಯದೇ ಉಳಿದ ಸಾಲುಗಳು.
*****

ಎಲ್ಲ ಹೇಳಿ ಮುಗಿಸಿಯಾಗಿದೆ
ಅವರಿವರ ಕಥೆ ;
ಹೇಳದೆ ಸುತ್ತಿಕೊಳ್ಳುತ್ತಿದೆ
ಅರಿವಿಗೆ ಬಾರದ ನಾಗರಿಕತೆ.
*****
ಮಗುವಿನ ಮುಗ್ದತೆಯಲ್ಲೂ
ಎಷ್ಟೊಂದು ಕವಿತೆಗಳು ;
ಓದುವ ತಾಯಿಯಲ್ಲೂ
ಮಹಾಕಾವ್ಯದ ಬೇರುಗಳು.
*****
ಊರೂಳಗೆ ಊರು
ತಳದ ಗುರುತು ತಾಗದೆ ;
ಮನುಕುಲವ ಬೆಸೆದು
ಬಯಲಾಗು ಬೇರು ಬಿಡದೆ.
*****
ಎಷ್ಟು ದಾರಿ ಸವೆದರೂ
ಎಲ್ಲೂ ಸೇರುವುದಿಲ್ಲ ಒಂದಕ್ಕೊಂದು ರೈಲು ಹಳಿ;
ಎಷ್ಟು ದೂರ ಸಾಗಿದರೂ
ಎಲ್ಲೂ ಬಾನು ಕೂಡಿದಂತೆ ಕಾಣುತ್ತಿಲ್ಲ ಈ ಇಳೆ.
*****
ನನ್ನ ಕವಿತೆಗೆ ಹೇಳಲೇನು
ಉಳಿದಿಲ್ಲ ಇಂದಿಗೆ :
ತನ್ನ ರೂಪ ಆಕಾರಕ್ಕೆ 
ಕಾಯುತ್ತಿಲ್ಲ ನಾಳೆಗೆ.
*****
ಕಡಿದ ಮರದಲ್ಲೂ
ಕೆತ್ತನೆಗೆ ಕಾಯ್ದ ಮೂರತಿ ;
ಹರಿವ ನೀರಲ್ಲೂ
ಬೆಳೆವ ಪೈರಿನ ಕೀರೂತಿ.
*****
ಮೌನಕ್ಕೆ ಶರಣಾಗಿದ್ದಾರೆ
ಮಾತು ಬಲ್ಲವರು ;
ಜೋತು ಬಿದ್ದಿವೆ
ಮೋಡಿ ಮಾತಿಗೆ ಕಿವಿಗಳು.
*****
ಎಂದೋ ಬರೆದ ಚಿತ್ರ
ಹರಿದು ಹಾಕಿದೆ ;
ಚಿಂದಿ ಆಯುವ ಹುಡುಗರು
ಜೋಡಿಸಿಟ್ಟು ನೋಡಿದರು.
*****
ಜೋಗುಳ ಕೇಳಿ ಮಗು ಮಲಗಿದೆ
ಮಾತು ಇರಲಿ ಮೆಲ್ಲಗೆ :
ತಾಯ ಕನಸಿಗೆ ನಿದಿರೆ ತುಂಬುತಿದೆ
ಅರಳಬೇಕಿನ್ನು ಮಲ್ಲಿಗೆ.
*****
ಕೇಳಿಸಲೆಂದು
ಎಲ್ಲ ಹೇಳಬೇಕಿಲ್ಲ :
ಕಣ್ಣುಗಳಿಗೆ ಮೌನ
ಅರ್ಥವಾಗುತ್ತದೆ.
*****
ಕೊಡೆ ಹಿಡಿಯಬಾರದು
ಎಳೆ ಬಿಸಿಲಿಗೆ ;
ಹಣೆ ಮಣಿಯಬಾರದು
ಕಂಡವರ ಕಾಲಿಗೆ.
******
ಎಲ್ಲವೂ ಕಾವ್ಯವಾಗಬೇಕಿಲ್ಲ
ಅನುಭವದ ಮೂಸೆಯಲ್ಲಿ ;
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ.
*****
ಪುಟ್ಟ ಗೂಡಿನಲ್ಲಿ
ಮರಿ ಹಕ್ಕಿ ಕಾಯುತ್ತಿದೆ;
ಅಮ್ಮ ತರುವ
ಹಾಲ್ದೆನೆಯ ಎಳೆ ಸವಿಗೆ.
*****
ಕವಿತೆ ಹಲವು
ಅರ್ಥಗಳ ಮೊತ್ತ :
ಈಗ ಹೇಳಿ ಎಲ್ಲಿ ಹೋಯಿತು
ನಿಮ್ಮ ಚಿತ್ತ ?.
**********************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ಮೊ.9845500890





ಗುರುವಾರ, ಡಿಸೆಂಬರ್ 5, 2013

ಸಾಲು ಸಾಲು ಹನಿಗಳು.


ಸಾಲು ಸಾಲು ಹನಿಗಳು.

************************

ಡಾ.ಪ್ರಕಾಶ ಗ.ಖಾಡೆ


ಮೌನದ ಪ್ರಸವ ಕಾಲದಲ್ಲಿ
ಕಾವ್ಯ ಹುಟ್ಟು ಪಡೆದಂತೆ :
ಲಯ ಭಾವ ವಸ್ತುಗಳು
ಮೈದುಂಬಿಕೊಳ್ಳುತ್ತವೆ.
************
ಯಾರು ನುಡಿಸಿದರು
ನಾದ ಲೋಕದ ತಂತಿ :
ಕಳೆದು ಹೋಗಿದೆ ಮನದಲ್ಲಿ
ಮಡುಗಟ್ಟಿದ ಭ್ರಾಂತಿ.
**********
ಪಲ್ಲಕ್ಕಿ ಮೇಲೆ
ಕುಳಿತಿದ್ದಾರೆ ಪ್ರಭುಗಳು :
ಹೊರುವವರಿಗಾಗಿ
ಕಾಯುತ್ತಿದ್ದಾರೆ ಹಿಂಬಾಲಕರು.
***********

ಗುಡ್ಡ ಕೊರೆದು
ದಾರಿ ಮಾಡಿದ್ದಾರೆ :
ಅಡ್ಡ ಬಂದ ಪ್ರಾಣಿ ಪಕ್ಷಿಗಳಿಗೂ
ದಾರಿ ತೋರಿಸಿದ್ದಾರೆ.
***********
ಒಡೆದ ಚೂರುಗಳಲ್ಲಿ
ಜೋಡಿಸಿಟ್ಟ ರೂಪ :
ಮನಸ್ಸಿನ ಮೂಲೆಯಲ್ಲುಳಿದ
ತೇವಗೊಂಡ ದೀಪ.
***********
ಬೃಹದಾಕಾರವಾಗಿ
ಬೆಳೆಯುತ್ತಿದೆ ಗೋಡೆ :
ಬಯಲುಗಳ ಅಳಿಸಿ
ಮೀರಿ ಎಲ್ಲ ಅಡೆ ತಡೆ.
***********
ಮನದ ಭಾವಗಳು
ರೂಪುಗೊಳ್ಳುವ ಹೊತ್ತು :
ಕವಿತೆಗೆ ಹೇಳಿ ಕಳಿಸಿ
ಬಿಟ್ಟಿರಬೇಡ ಬಹಳ ಹೊತ್ತು.
***********
ಅಗಲಿಕೆಯಲ್ಲಿ ಉಳಿದ
ಫಲಿತ ಶೋಕ :
ನೆನಪುಗಳಿಗೆ ಸಮನಿಲ್ಲ
ಯಾವ ಗ್ರಂಥದ ಶ್ಲೋಕ.
*************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ


ಗುರುವಾರ, ನವೆಂಬರ್ 21, 2013

ಚಳಿ ಹನಿಗಳು.

ಚಳಿ ಹನಿಗಳು.
**************
ಡಾ.ಪ್ರಕಾಶ ಗ.ಖಾಡೆ

ಥರಗುಟ್ಟುವ ಚಳಿಗೆ
ಬೆಚ್ಚನೆಯ ಕಂಬಳಿಯೇ ಲೇಸು ;
ಗದ್ ಗದ್ಗಿತ ಮನಕೆ 
ಕಾವ್ಯ ವಾಚನವೇ ಸೊಗಸು.
*****
ಗುಡಿಸಲ ರಾತ್ರಿಯ
ಬೆಳಗುತ್ತಿವೆ ಬಾನ ಚುಕ್ಕೆಗಳು;
ಥರಗುಟ್ಟುವ ಚಳಿಯಲ್ಲೂ
ನಲಿಯುತ್ತಿವೆ ಮಕ್ಕಳು.
*****
ಚಳಿ ಗಾಳಿ ಮಳೆಗೆ
ಇಳೆ ಅರಳಿತು ;
ಕವಿ ಕಾವ್ಯ ಕಲ್ಪನೆ
ಗರಿಗೆದರಿತು.
*****
ಕತ್ತಲೆ ಮತ್ತು ಚಳಿ
ಜೊತೆಯಾಗಿವೆ ;
ಕವಿಯ ಮನದ
ಭಾವ ಬಯಲಾಗಿದೆ.
*****
ಚಳಿಗೆ ಉರಿ 
ಕಾಯಿಸಿಕೊಳ್ಳುತ್ತ ಇದ್ದಾರೆ
ಮಕ್ಕಳು ;
ನಡುಗುತ್ತ ಬೀಡಿ
ಹೊತ್ತಿಸಿಕೊಳ್ಳುತ್ತ ಇದ್ದಾರೆ
ಮುದುಕರು.
*****
ಚಳಿಗೆ ನಡುಗುವ ಮಕ್ಕಳಿಗೆಹೊದಿಕೆಯಾಗಲಿ ನನ್ನ ಕವನ ;
ಮುದುಡಿ ಮಲಗಿದ ಕಂದಮ್ಮಗಳಿಗೆ
ತಾಯ ಮಡಿಲಾಗಲಿ ನನ್ನ ಕವನ.
-ಡಾ.ಖಾಡೆ





ಸಾಲು ಹನಿಗಳು-3

ಸಾಲು ಹನಿಗಳು-3

  -ಡಾ.ಪ್ರಕಾಶ ಗ.ಖಾಡೆ

ಕಳೆದು ಹೋದದ್ದು ಸಿಕ್ಕರೆ 
ಬಣ್ಣ ಬಳಿಯಬೇಡಿ ;
ಅದು ನನ್ನ ಕವಿತೆಯ
ಒಡಲ ಭಾವ.
*****
ಎಲ್ಲವೂ ಕಾವ್ಯವಾಗಬೇಕಿಲ್ಲ
ಅನುಭವದ ಮೂಸೆಯಲ್ಲಿ ;
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ.

*****
ಪುಟ್ಟ ಗೂಡಿನಲ್ಲಿ
ಮರಿ ಹಕ್ಕಿ ಕಾಯುತ್ತಿದೆ;
ಅಮ್ಮ ತರುವ
ಹಾಲ್ದೆನೆಯ ಎಳೆ ಸವಿಗೆ.

*****
ಮೌನ ಪಯಣದಲ್ಲಿ
ಎಷ್ಟೊಂದು ಕನಸು ಕನವರಿಕೆಗಳು;
ವಾಸ್ತವದ ಅರುವಿನಲ್ಲಿ
ಬಯಲಾಗುವ ಬಯಕೆಗಳು.

*****
ಅಂಬರದ ಬಯಲು
ಮೈದುಂಬಿಕೊಳ್ಳುವ ಸಮಯ;
ಗಿರಿ ನವಿಲು ಜೊತೆ ಅರಸಿ
ಕುಣಿವ ತನ್ಮಯ.

*****
ಹಾರುವ ಹಕ್ಕಿಗಳಿಗೆ
ಆಗಸವೇ ಆಡುಂಬೊಲ ;
ಹಾಡುವ ಜನಪದರಿಗೆ
ಬದುಕೇ ಜಗದಗಲ.

*****
ಚಂದಿರ ಮೂಡುವ ಹೊತ್ತು
ಮರೆಗೆ ಸರಿದ ಚುಕ್ಕೆಗಳು ;
ಕವನ ಮೂಡುವ ಘಳಿಗೆ
ಮೂಲೆ ಸೇರಿದ ಮಾತುಗಳು.
*****
ಬಿಸಿಲಿಗೆ ಒಣ ಹಾಕಿದ
ಹಪ್ಪಳದ ಸವಿ
ಎಣ್ಣೆಯಲ್ಲಿ ಕರಿದಾಗ ;
ಮೌನ ಕುಲುಮೆಯಲ್ಲಿ 
ಕಟ್ಟಿದ ಕಾವ್ಯ ಸವಿ
ಮನದಾಳದಲ್ಲಿಳಿದಾಗ.
*****
ಹರಿವ ನೀರಿಗೆ
ತಟದ ಗುರುತು :
ಮೋಹಕ ನಿರಿಗೆ
ನಾರಿ ಮಹತು.
*****
ಎಲ್ಲ ಓದಿಯಾದ ಮೇಲೆ
ಕೊನೆಗೆ ನಿಮ್ಮ ರುಜು ಬೇಡ ;
ನನ್ನ ಕವಿತೆಗೆ
ಬದುಕೇ ಬಯಲು.

-ಡಾ.ಪ್ರಕಾಶ ಗ.ಖಾಡೆ


ಸೋಮವಾರ, ನವೆಂಬರ್ 11, 2013

ಸಾಲು ಹನಿಗಳು -2 ಡಾ.ಖಾಡೆ

ಸಾಲು ಹನಿಗಳು -2
ಡಾ.ಪ್ರಕಾಶ ಗ.ಖಾಡೆ



ಧ್ಯಾನಸ್ಥ ಮನಸ್ಥಿತಿಗೆ
ಮೀನ ಹಿಡಿವ ಬಕ ಉದಾಹರಣೆ :
ಬಲಿಯಾದ ಮೀನ
ಬದುಕಿಗೆ ಏನು ಉದಾಹರಣೆ ?
*********
ಎಳೆ ಚಿಗುರ ಮೆದ್ದ
ಕೋಗಿಲೆಯ ಆಲಾಪ :
ಹತಗೊಂಡ ಚಿಗುರಿಗೆ
ಕಳಕೊಂಡ ನೆನಪ.
*********
ಮರೆತ ಕ್ಷಣದಿಂದ
ಜೋಪಾನವಾಗಿವೆ
ಮನದ ತುಂಬ ನೆನಪುಗಳು;
ಮರುಕಳಿಸಿ ಬಂದರೂ
ನಿಂತಿಲ್ಲ ಬಿಂಬದಲ್ಲಿ
ಹುಸಿ ಕನವರಿಕೆಗಳು.
*********

ಶನಿವಾರ, ನವೆಂಬರ್ 9, 2013

ಸಾಲು ಹನಿಗಳು -ಡಾ.ಖಾಡೆ



ಸಾಲು ಹನಿಗಳು
**************

                                           - ಡಾ.ಪ್ರಕಾಶ ಗ.ಖಾಡೆ

ಎಷ್ಟೊಂದು ಹೂ ಗಿಡಗಳನ್ನು
ಹಚ್ಚಿದ್ದಾರೆ ವರಾಂಡದಲ್ಲಿ;
ಕಣ್ತುಂಬಿ ಕೊಳ್ಳಬೇಕೆಂದರೆ
ಕಟ್ಟಿದ್ದಾರೆ ನಾಯಿ.

**********
ಸಂತೆಯಲ್ಲಿ ಸುಮ್ಮನೆ ಹೋದರೂ
ಏನು ಬೇಕೆಂದು ಕೇಳುತ್ತಾರೆ;

ಕಾವ್ಯ ಕಳಕೊಂಡಿದೆ
ಹುಡುಕಿ ಕೊಡುತ್ತಾರೇನು ?
***********
ಭಾವದೊಳಗಿನ
ಕಾವ್ಯ ತೆನೆ :
ಕುದಿದ ಹಾಲಿನ
ಆರಿ ಬಂದ ಕೆನೆ.
***********
ನಡೆದ ಹಾದಿಯ
ಪಡೆದ ಭಾಗ್ಯ :
ಸ್ನೇಹದೊಲುಮೆಯ
ಬೆಸುಗೆ ನಿತ್ಯ.
*********
ಬಿಸಿಲ ದಾರಿಯಲ್ಲಿ
ಮರದ ನೆರಳಿನ ಆಸರೆ.
ದಣಿದ ಮನಕೆ
ಕಾವ್ಯ ಕನ್ನಿಕೆಯ ಆ ಸೆರೆ.
********
ಕೆನೆಗಟ್ಟಿದ ಹಾಲು
ಕುದಿತದ ಸಮಯ ಬಯಸಿತು.
ಕಂಡರಿಸಿದ ಕಾವ್ಯ
ಧ್ಯಾನದ ಪರಿಯ ಬೆಸೆಯಿಸಿತು.
**********

ಭಾನುವಾರ, ನವೆಂಬರ್ 3, 2013

ಪ್ರಕಾಶಮಾನ ಪದ್ಯಗಳು
       (ದೀಪಾವಳಿ ಹೊತ್ತಿಗೆ)
*************************

ಡಾ.ಪ್ರಕಾಶ ಗ.ಖಾಡೆ

ಯಾರು ಹಚ್ಚಿಟ್ಟರೂ
ದೀಪಗಳ ಸಾಲು
ಕಳೆಯುವದು ಕತ್ತಲೆ
ಬೆಳಕದುವೆ ಮೇಲು. 
   
****
ಉಳ್ಳವರು ಹಚ್ಚಿದ್ದಾರೆ
ತುಪ್ಪದ ದೀಪ ,
ಕರಗಿಸಿ ಬೆಣ್ಣೆ

ಗುಡಿಸಲ ಮಕ್ಕಳು 
ಹಸಿದಿದ್ದಾರೆ
ಹಾಕಲು ಇಲ್ಲ,
ಒಗ್ಗರಣೆಗೆ ಎಣ್ಣೆ.

******
ಹಣತೆ ತುಂಬ ಎಣ್ಣೆ ಬತ್ತಿ
ಪ್ರಜ್ವಲಿಸುವ ಬೆಳಕು
ಕರಗಿ ಕತ್ತಲು ಹಸನಾಗಲಿ
ನೊಂದವರ ಬದುಕು
*******
ದೀಪದಿಂದ ದೀಪ ಹೊತ್ತಿ
ತುಂಬಿ ಬರಲಿ ಬೆಳಕು
ಶ್ರಮದ ದುಡಿಮೆಗೆ ತಕ್ಕಫಲಿತ
ಸಿಗಲಿ ಎಲ್ಲ ಕಾಲಕು .
*******
ಮನದ ಕತ್ತಲೆಯ 
ಕಳೆಯಲು ಬೇಕು 
ಅಕ್ಷರದ ರೂಪ

ಜಗದ ಕತ್ತಲೆಯ
ಕಳೆಯಲು ಸಾಕು
ಬೆಳಗುವ ದೀಪ
*******
ಕತ್ತಲಲ್ಲಿ ಹಚ್ಚಿಟ್ಟಿದ್ದಾರೆ
ಎಷ್ಟೊಂದು ಜ್ಯೋತಿ ;
ಹಬ್ಬಿದೆ ಎಲ್ಲಕಡೆ ಬೆಳಕಿನ ದೀಪ್ತಿ.

ಮೂಡಣ ಸೂರ್ಯ
ಮೂಡುವ ಹೊತ್ತಿಗೆ
ಅರೇ ಮರೆಯಾಯಿತೇಕೆ
ಥಳಕು ಬಳುಕಿನ ಕಾಂತಿ.
***********
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ