ಬದುಕಾಗುವ ಕವಿತೆ.
ಡಾ.ಪ್ರಕಾಶ ಗ.ಖಾಡೆ
ಎಷ್ಟೊಂದು ಸುಂದರಿಯರು
ರೂಪ ಲಾವಣ್ಯದಿ ಮನ ಕದ್ದವರು :
ಶಿಲ್ಪಿಯ ಕೌಶಲದಲಿ ಮೈದೋರಿದ
ಬೇಲೂರ ಶಿಲಾ ಬಾಲಕಿಯರು.
************
ಬಿಸಿಲು ಏರಿದಂತೆಲ್ಲ ನಳನಳಿಸುವ
ಎಳೆ ವನಸುಮಗಳು ;
ಕಣ್ಣು ಸೊಗಸಿಗೆ ಕಾರಣವಾದವು
ಮನ ತಂಪೆರೆಯಲು.
***********
ಈಗ ಎಲ್ಲವೂ ಅಪರಾಧವಾಗುತ್ತಿದೆ
ನಿಮ್ಮ ಕನಸುಗಳನ್ನು ಕದಿಯುವದೂ ಸಹ:
ಈಗ ಎಲ್ಲರೂ ಬಂಧಿಯಾಗುತ್ತಿಲ್ಲ
ಕಣ್ಣು ತುಂಬ ಕನಸುಗಳಿದ್ದರೂ ಸಹ.
******************
ಹುಡುಕಿ ಬರುವ ದುಂಬಿಗಳು
ಕೊರಗದಿರಲೆಂದು ಈ ಹೂವ ಹರಿಯಲಿಲ್ಲ ;
ಬೇಕಿದ್ದರೆ ಹೇಳಿಬಿಡಿ ಹೂವ ಮೇಲೊಂದು
ಕವಿತೆಯ ಬರೆದರೆ ಆಯ್ತಲ್ಲ.
*************
ಕಳೆದು ಹೋಗಿದ್ದಾರೆ ಬೆಳಕಿನವರು
ಕತ್ತಲೆಯ ಈ ರಾತ್ರಿಯಲ್ಲಿ ;
ಹುಡುಕ ಬಂದವರಿಗೇ ದಾರಿ ತಪ್ಪಿಸಿದ್ದಾರೆ.
ಹರಿವಿಟ್ಟ ಕನಸುಗಳಲ್ಲಿ.
*************
ಕತ್ತಲಾವರಿಸಿದ ರಾತ್ರಿಗೆ
ನಿದಿರೆಯ ಹೂ ಹಾಸಿಗೆ ;
ತಣ್ಣಗೆ ಮಲಗಿದ ಹೊತ್ತಿಗೆ
ಕನಸುಗಳ ಮೆರವಣಿಗೆ
**********
ಹರಿದ ಸಂಬಂಧಗಳ ಬೆಸುಗೆಗೆ
ಬೇಕು ಮನದ ಕಕ್ಕುಲತೆ ;
ಮುರಿದ ಮನಸುಗಳ ಕಟ್ಟಲು
ಬೇಕು ಹೃದಯ ವೈಶ್ಯಾಲತೆ.
**************
ಬರಿದಾಗದ ವರತೆ
ಜಲದಾಯಿಯ ಬೊಗಸೆ ;
ಬದುಕಾಗುವ ಕವಿತೆ
ಮನುಕುಲದ ಚರಿತೆ.
**************
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ