ಮತ್ತೆ ಬಾಲ್ಯಕ್ಕೆ
****************
ಡಾ.ಪ್ರಕಾಶ ಗ.ಖಾಡೆ
ಅವ್ವನ ನೆನೆಸಿಕೊಂಡಾಗಲೆಲ್ಲ
ಬಾಲ್ಯವೇ ಕಣ್ಣೇದಿರು ಬಿಚ್ಚಿಕೊಳ್ಳುತ್ತದೆ.
ಉರಿವ ಬಿಸಿಲ ಬಯಲಲ್ಲಿ
ಬೆಳೆದು ನಿಂತ ಬಿಳಿಜೋಳ ಹೊಲ ಕಾಯುವಲ್ಲಿ
ಅಪ್ಪನ ನಾಟಕಕ್ಕೆ ಬಣ್ಣ ಹಚ್ಚಿಕೊಂಡು
ರಂಗದ ತುಂಬೆಲ್ಲಾ ಒಡಾಡಿಕೊಂಡಲ್ಲಿ
ತಂಗಿ ಮಲಗಿದ ತೊಟ್ಟಿಲ ತೂಗಿ
ತಲೆಗೆ ಪೆಟ್ಟು ತಿಂದು ಗುಮ್ಮಟೆ ಪಡೆಯವಲ್ಲಿ
ಧೋ ಧೋ ಸುರಿವ ಮಳೆಯಲ್ಲಿ
ತೋಯಿಸಿಕೊಂಡ ಪಾಠೀ ಚೀಲದಲ್ಲಿ
ಉಳಿದ ಹೆಸರು ಕಾಳು ಮರುದಿನ ಮೊಳಕೆಯೊಡೆಯುವಲ್ಲಿ
ಅವ್ವನದೇ ನೆನಪು.
ಮಾನವಮಿಗೆ ಹಚ್ಚಿಟ್ಟ
ಒಂಬತ್ತು ದಿನಗಳ ದೀಪ ಆರದಂತೆ
ರಾತ್ರಿಯಿಡೀ ಆಗಾಗ ಎದ್ದು ಕಾಯುವಲ್ಲಿ
ಯುಗಾದಿಗೆ ಗುಡಿಪಾಡವಾ ಕಿಡಕಿಗೆ ಕಟ್ಟಿ
ಗಂಧ ಬಳಿದು ಪೂಜಿಸುವಲ್ಲಿ
ಬನ್ನಿ ಹಬ್ಬಕ್ಕೆ ಬನ್ನಿ ಬಂಗಾರ ಗಿಡÀ ಹುಡುಕಿ
ಗಟ್ಟಿ ಬಂಗಾರ ತರುವಲ್ಲಿ
ಊರ ಜಾತ್ರೆಗೆ ಓಕಳಿ ಹೊಂಡ ತುಂಬಲು
ಹಳ್ಳದಿಂದ ನೀರ ತರುವಲ್ಲಿ
ಎಲ್ಲಕ್ಕೂ ಅವ್ವನ ಕರಾರುವಕ್ಕಾಜ್ಞೆಗಳೇ
ಇಂದೂ ನನ್ನ ಓಡಾಟಕ್ಕೆ ಮೂಲವಾಗಿವೆ.
ಕಾಲಿಗೆ ಮುಳ್ಳು ನೆಟ್ಟರೂ
ನೆತ್ತಿಗೆ ಜ್ವರ ಏರಿದರೂ
‘ಕಣ್ಣು ಬಂದು’ ಕಾಣದಂತಾದಾಗ
‘ಬಾಯಿ ಬಂದು’ ಆಡದಂತಾದಾಗ
ಅವ್ವನ ಸ್ಪರ್ಶವೇ ಎಲ್ಲ ದೂರಾದ ನೋವು.
ಹಸಿದ ಹೊಟ್ಟೆಗೆ ಬಿಸಿ ರೊಟ್ಟಿಯೇ ಆಗಬೇಕು
ಹಬ್ಬಕ್ಕೆ ಹೋಳಿಗೆ ಕಟ್ಟಿನ ಸಾರು ಈಗಲೂ ಉಳಿದ ರುಚಿ.
ಅಣ್ಣ ತಮ್ಮ ತಂಗಿಯರು
ಜೊತೆ ಆಡುತ್ತಾ ,ಜಗಳಾಡುತ್ತಾ
ಹಂಚಿಕೊಳ್ಳುತ್ತಾ, ಕಸಿದುಕೊಳ್ಳುತ್ತಾ
ಅವ್ವನ ಸಿಟ್ಟಿಗೆ ಸಿಡುಕಿಗೆ ಸ್ವಾಂತನಕ್ಕೆ
ನಾವು ನಾವೇ ಕಾರಣರಾಗುತ್ತ ದೊಡ್ಡವರಾದೆವು.
ಛೇ ! ನಾವು ದೊಡ್ಡವರಾಗಬಾರದಿತ್ತು.
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.
ವಿಳಾಸ ;
ಡಾ.ಪ್ರಕಾಶ ಗ.ಖಾಡೆ,
’ಶ್ರೀಗುರು’,ಸರಸ್ವತಿ ಬಡಾವಣೆ,
ಸೆಕ್ಟರ್ ನಂ. 63,ನವನಗರ,
ಬಾಗಲಕೋಟ
ಮೊ.9845500890.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ