ಸೋಮವಾರ, ಫೆಬ್ರವರಿ 10, 2014

ಒಡಲ ತುಂಬಿದರು..-ಡಾ.ಖಾಡೆ






















ಡಾ.ಪ್ರಕಾಶ ಗ.ಖಾಡೆ

ತಕ್ಕಡಿಗೆ ಇಟ್ಟ ಕಲ್ಲುಗಳಿಗೆ
ಇಟ್ಟಲ್ಲಿಯೇ ನೆಲೆ ;
ತೂಗಿಸಿಕೊಂಡ ವಸ್ತುಗಳಿಗೆ
ಎಷ್ಟೊಂದು ಬೆಲೆ.
*******
ಉದುರಿದೆಲೆಗಳು
ವಸಂತಾಗಮನಕೆ
ಸರಿವಹೊತ್ತಿಗೆ ;
ಚಿಗುರಿದ ಕುಡಿಗಳು
ಚೆಲುವಾದವು.
*****
ಮೌನ ಬೆಟ್ಟಕ್ಕೆ 
ಮಾತಿಗೆ ನಿಂತ
ಗಾಳಿ 
ಉಸಿರಿದ್ದು ;
ಕೇಳಿಸಿಕೊಂಡ ಗಿಡ ಮರಗಳು
ವಸಂತಕೆ ಬರಹೇಳಿದವು.
******
ಬಸ್ಸಿನ ಚಾಲಕ 
ಬರೀ ಬಸ್ಸು ಓಡಿಸುತ್ತಿಲ್ಲ ;
ಕಿಡಕಿಯಲ್ಲಿ ತೂರಿಬಿಟ್ಟ
ನಮ್ಮ ಕನಸುಗಳನ್ನೂ
ಓಡಿಸುತ್ತಿದ್ದಾನೆ.
*****
ಓದಿ ಮುಗಿಸಿದ ಪತ್ರಿಕೆ
ಬದಿ ಸರಿಯಿತು ;
ಆದರೂ ಎಷ್ಟೋ ವಿಷಯ
ಓದದೇ ಉಳಿಯಿತು.
*****
ತೊಳೆ ಬಿಡಿಸಿದ ಅರಳೆ
ಬಟ್ಟೆಯಾಯಿತು ;
ಕಳೆಗಟ್ಟದ ಸಿಪ್ಪೆ
ತಿಪ್ಪೆ ಸೇರಿತು.
******
ಗಡಿಯಾರದ ಮುಳ್ಳುಗಳು
ಚುಚ್ಚುವುದಿಲ್ಲ ;
ಸಮಯ ತಪ್ಪಿದವರ
ಹುಚ್ಚು ಬಿಡಿಸುತ್ತವೆ.
******
ಅದೇಕೋ ಸತ್ಯ ಹರಿಶ್ಚಂದ್ರನ
ಕಥೆ ಬಿದ್ದು ಹೋಗುತ್ತಿದೆ ;
ಮೊಬೈಲ್ ಬಂದ ಮೇಲೆ
ಏಕೆ ಹೀಗಾಗುತ್ತಿದೆ.
******
ಬಾಯಿಗೆ ಬಂದದ್ದು
ಆಡಿಕೊಂಡವರು :
ಬೈಗುಳಗಳ ಕೃತಿಯ
ಒಡಲ ತುಂಬಿದರು.
**********
ಡಾ.ಪ್ರಕಾಶ ಗ.ಖಾಡೆ,
ಬಾಗಲಕೋಟ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ